ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ |
ತಾನಲ್ಲ ತನ್ನದಲ್ಲ ಆಸೆ ಥರವಲ್ಲ ಮುಂದೆ ಬಾಹೋದಲ್ಲ
ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು||ಪ||
ಆಶ ಕ್ಲೇಶ ದೋಷವೆಂಬ ಅಭ್ದಿಯೊಳು ಮುಳುಗಿ ಯಮನ ಪಾಶಕ್ಕೊಳಗಾಗದೆ ನಿರ್ದೋಷಿಯಾಗು ಸಂತೋಷಿಯಾಗು
ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರ ಏಸು ದೇಶ ತಿರುಗಿದರೆ ಬಾಹೋದೇನೋ ಅಲ್ಲಿ ಹೋದೇನೋ
ದೋಷ ನಾಶ ಕೃಷ್ಣವೇಣಿ ಗಂಗೆ ಗೋದಾವರಿ ಭವ ನಾಶಿತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ |
ಮೀಸಲಾಗಿ ಮಿಂದು ಜಪ ತಪ ಹೋಮ ನೇಮಗಳ ಏಸು ಬಾರಿ ಮಾಡಿದರು ಫಲವೇನು ಈ ಛಲವೇನು || 1 ||
ಅಂದಿಗೋ ಇಂದಿಗೋ ಒಮ್ಮೆ ಸಿರಿಕಮಲೇಶನನ್ನು ಒಂದು ಬಾರಿ ಯಾರೂ ಹಿಂದ ನೆನೆಯಲಿಲ್ಲ ಮನದಣಿಯಲಿಲ್ಲ |
ಬಂದು ಬಂದು ಭ್ರಮೆಗೊಂಡು ಮಾಯಾಮೋಹಕ್ಕೆ ಸಿಕ್ಕಿ | ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ಬಂಧ ಕಳೆಯಲಿಲ್ಲ | ಸಂದೇಹವ ಮಾಡದಿರು ಅರಿವು ಎಂಬ ದೀಪವಿಟ್ಟು ಇಂದು ಕಂಡ್ಯ ದೇಹದಲ್ಲಿ ಪಿಂಡಾಂಡ ಹಾಗೆ ಬ್ರಹ್ಮಾಂಡ |
ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ | ಮುಕುಂದನಿಂದ ಮುಕ್ತಿ ಬೇಡು ಕಂಡ್ಯ ನೀ ನೋಡು ಕಂಡ್ಯ || 2 ||
ನೂರು ಬಾರಿ ಶರಣು ಮಾಡಿ ನೀರ ಮುಳುಗಲ್ಯಾಕೆ ಪರ ನಾರಿಯರ ನೋಟಕೆ ಗುರಿಯ ಮಾಡಿದಿ ಮನ ಸೆರೆಯ ಮಾಡಿದಿ | ಸೂರೆಯೊಳು ಸೂರೆ ತುಂಬಿ ಮೇಲೆ ಹೂವಿನ ಹಾರ ಗೀರು ಗಂಧ ಅಕ್ಷತೆಯ ಧರಿಸಿದಂತೆ ನೀ ಮೆರೆಸಿದಂತೆ |
ಗಾರುಢಿಯ ಮಾತ ಬಿಟ್ಟು ನಾದಬ್ರಹ್ಮನ ಪಿಡಿದು ಸಾರಿ ಸೂರಿ ಮುಕ್ತಿಯನ್ನು ಶಮನದಿಂದ ಮತ್ತೆ ಸುಮನದಿಂದ |
ನಾರಾಯಣ ಅಚ್ಯುತ ಅನಂತಾದಿ ಕೇಶವನ | ಸಾರಾಮೃತವನ್ನುಂಡು ಸುಖಿಸೋ ಲಂಡ ಜೀವವೇ ಎಲೇ ಭಂಡ ಜೀವವೇ || 3 ||
Ēsu kāyaṅgaḷa kaḷedu embatnālku lakṣa jīvarāśiyannu dāṭi banda ī śarīra |
tānalla tannadalla āse tharavalla munde bāhōdalla
dāsanāgu viśēṣanāgu dāsanāgu viśēṣanāgu||pa||
āśa klēśa dōṣavemba abhdiyoḷu muḷugi yamana pāśakkoḷagāgade nirdōṣiyāgu santōṣiyāgu
kāśi vāraṇāsi kan̄ci kāḷahasti rāmēśvara ēsu dēśa tirugidare bāhōdēnō alli hōdēnō
dōṣa nāśa kr̥ṣṇavēṇi gaṅge gōdāvari bhava nāśituṅgabhadre yamune vāsadalli upavāsadalli |
mīsalāgi mindu japa tapa hōma nēmagaḷa ēsu bāri māḍidaru phalavēnu ī chalavēnu || 1 ||
andigō indigō om’me sirikamalēśanannu ondu bāriyārū hinda neneyalilla manadaṇiyalilla |
bandu bandu bhramegoṇḍu māyāmōhakke sikki nondu bendu ondarinda uḷiyalilla bandha kaḷeyalilla | sandēhava māḍadiru arivu emba dīpaviṭṭu indu kaṇḍya dēhadalli piṇḍāṇḍa hāge brahmāṇḍa |
indu hariya dhyānavannu māḍi vivēkadi mukundaninda mukti bēḍu kaṇḍya nī nōḍu kaṇḍya || 2 ||
nūru bāri śaraṇu māḍi nīra muḷugalyāke para nāriyara nōṭake guriya māḍidi mana sereya māḍidi |
sūreyoḷu sūre tumbi mēle hūvina hāra gīru gandha akṣateya dharisidante nī meresidante |
gāruḍhiya māta biṭṭu nādabrahmana piḍidu sāri sūri muktiyannu śamanadinda matte sumanadinda | nārāyaṇa acyuta anantādi kēśavana | sārāmr̥tavannuṇḍu sukhisō laṇḍa jīvavē elē bhaṇḍa jīvavē || 3 ||
Recent Comments